ಸೊರಬ
	ಭಾರತದ ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ಒಂದು ತಾಲ್ಲೂಕು ಮತ್ತು ಆಡಳಿತ ಕೇಂದ್ರ. ಈ ತಾಲ್ಲೂಕನ್ನು ಪೂರ್ವದಲ್ಲಿ ಶಿಕಾರಿಪುರ, ದಕ್ಷಿಣದಲ್ಲಿ ಸಾಗರ ತಾಲ್ಲೂಕುಗಳೂ ಪಶ್ಚಿಮದಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ, ಶಿರಸಿ ತಾಲ್ಲೂಕುಗಳೂ ಉತ್ತರ ಮತ್ತು ಈಶಾನ್ಯದಲ್ಲಿ ಹಾವೇರಿ ಜಿಲ್ಲೆಯ ಹಾನಗಲ್ಲು, ಹಿರೇಕೆರೂರು ತಾಲ್ಲೂಕುಗಳೂ ಸುತ್ತುವರಿದಿವೆ. ಸೊರಬ, ಚಂದ್ರಗುತ್ತಿ, ಉಳವಿ, ಕುಪ್ಪಗಡ್ಡೆ, ಜಡೆ ಹಾಗೂ ಆನವಟ್ಟಿ ಹೋಬಳಿಗಳನ್ನೊಳಗೊಂಡ ಈ ತಾಲ್ಲೂಕಿನಲ್ಲಿ 305 ಗ್ರಾಮಗಳಿವೆ. ವಿಸ್ತೀರ್ಣ 1,138.7 ಚ.ಕಿಮೀ. ಜನಸಂಖ್ಯೆ 1,84,028.

	ಪಶ್ಚಿಮದಿಂದ ಪೂರ್ವಕ್ಕೆ ಇಳಿಜಾರಾಗಿರುವ ಈ ತಾಲ್ಲೂಕಿನ ಬೆಟ್ಟಗುಡ್ಡಗಳಲ್ಲಿ ಚಂದ್ರಗುತ್ತಿ ಬೆಟ್ಟ (848 ಮೀ) ಮುಖ್ಯವಾದದ್ದು. ವರದಾ ಮತ್ತು ದಂಡಾವತಿ ಈ ತಾಲ್ಲೂಕಿನ ಮುಖ್ಯ ನದಿಗಳು. ವರದಾ ನೈಋತ್ಯ ದಿಕ್ಕಿನಿಂದ ತಾಲ್ಲೂಕನ್ನು ಪ್ರವೇಶಿಸಿ ಉತ್ತರಾಭಿಮುಖ ವಾಗಿ ಹರಿದು ಮೂರು ಕಡೆ ಶಿರಸಿಯಿಂದ ಸೊರಬ ತಾಲ್ಲೂಕನ್ನು ವಿಂಗಡಿಸುವ ಗಡಿಯಾಗಿ, ಮಧ್ಯೆ ಸ್ವಲ್ಪ ದೂರ ಶಿರಸಿ ತಾಲ್ಲೂಕಿನಲ್ಲಿ ಹರಿದು ಮತ್ತೆ ಈ ತಾಲ್ಲೂಕನ್ನು ಪಶ್ಚಿಮ ದಿಕ್ಕಿನಿಂದ ಪ್ರವೇಶಿಸಿ ಈಶಾನ್ಯಾಭಿಮುಖವಾಗಿ ಹರಿದು ಹಾನಗಲ್ಲು ತಾಲ್ಲೂಕನ್ನು ಪ್ರವೇಶಿಸುವುದು. ದಂಡಾವತಿ ನದಿ ತಾಲ್ಲೂಕಿನ ಮಧ್ಯದಲ್ಲಿ ದಕ್ಷಿಣದಿಂದ ಉತ್ತರಕ್ಕೆ ಹರಿದು ವರದಾ ನದಿಯನ್ನು ಸೇರಿಕೊಳ್ಳುವುದು. ಇವಲ್ಲದೆ ಈ ತಾಲ್ಲೂಕಿನಲ್ಲಿ ನಾಗರಹಳ್ಳ, ಯೆಲವಾತದ ಹಳ್ಳ, ಗುಡ್ವಿ ಹಳ್ಳ, ಕನ್ನನಮನೆ ಹಳ್ಳ ಮತ್ತು ಕುಪ್ಪೆ ಹಳ್ಳ ಮುಂತಾದ ಸಣ್ಣಪುಟ್ಟ ಹಳ್ಳಗಳು ಹರಿದು ದಂಡಾವತಿಯನ್ನು ಸೇರುವುವು. ಮಲೆನಾಡು ಪ್ರದೇಶಕ್ಕೆ ಸೇರಿರುವ ಈ ತಾಲ್ಲೂಕಿನ ವಾರ್ಷಿಕ ಸರಾಸರಿ ಮಳೆ 2,135.05 ಮಿಮೀ. ಚಂದ್ರಗುತ್ತಿ ಅರಣ್ಯಪ್ರದೇಶ ಈ ತಾಲ್ಲೂಕಿನಲ್ಲಿದೆ. ನೇರಳೆ, ಶಿವನಿ, ಕರಿಮರ, ಹತ್ತಿ, ನಂದಿ, ಹೊನ್ನೆ, ಮತ್ತಿ, ಆಲ, ದಿಂಡಿಗ, ಬಿಲ್ವಾರ, ಬನ್ನಿ, ಬಾಗೆ, ಶಾಲಿ, ಹಲಸು, ಬೇವು, ಹಿಪ್ಪೆ, ಮಾವು, ಬೂರುಗ, ಬಗನಿ, ಕಕ್ಕೆ, ಬೀಟೆ, ಸಂಪಿಗೆ, ಹೊಂಗೆ, ಸಾಗುವಾನಿ, ದೇವದಾರು, ಧೂಪದಮರ ಇತ್ಯಾದಿ ಅಮೂಲ್ಯವಾದ ಅನೇಕ ಬೆಲೆ ಬಾಳುವ ಮರಗಳು ಇಲ್ಲಿ ಬೆಳೆಯುತ್ತವೆ.

	ತಾಲ್ಲೂಕಿನ ಹೆಚ್ಚು ಪ್ರದೇಶ ಸಾರಜನಕಾಂಶ ಹೆಚ್ಚುಳ್ಳ ಕೆಂಪು ಜೇಡಿ ಮತ್ತು ಜಂಬು ಮಣ್ಣಿನಿಂದ ಕೂಡಿದೆ. ಈ ತಾಲ್ಲೂಕಿನ ವ್ಯವಸಾಯಕ್ಕೆ ವರದಾ ಮತ್ತು ದಂಡಾವತಿ ನದಿಗಳಲ್ಲದೆ ಕೆಲವು ಹಳ್ಳಗಳೂ ಜಲಪೂರೈಕೆ ಮಾಡುತ್ತಿವೆ. ಬತ್ತ, ಸೇಂಗಾ, ಕಬ್ಬನ್ನು ಬೆಳೆಯುವರು. ಸ್ವಲ್ಪಮಟ್ಟಿಗೆ ರಾಗಿ, ವಿವಿಧ ದ್ವಿದಳ ಧಾನ್ಯಗಳನ್ನೂ ಬೆಳೆಯಲಾಗುತ್ತದೆ. ಈ ತಾಲ್ಲೂಕಿನಲ್ಲಿ ತೋಟದ ಬೆಳೆಗಳಾದ ಅಡಕೆ, ತೆಂಗು, ಗೋಡಂಬಿ, ತರಕಾರಿಗಳು ಮತ್ತು ವಿವಿಧ ಹಣ್ಣುಗಳನ್ನು ಬೆಳೆಯುವುದುಂಟು. ತಾಲ್ಲೂಕಿನಲ್ಲಿ ಪಶುಪಾಲನೆ ಮತ್ತು ಮತ್ಸ್ಯೋದ್ಯಮವಿದೆ.

	ಗಂಧ, ದಂತ ಮತ್ತು ಬೆಲೆಬಾಳುವ ಮರದ ಸಾಮಾನುಗಳಿಗೆ ಈ ತಾಲ್ಲೂಕು ಪ್ರಸಿದ್ಧ. ಕೈಮಗ್ಗದ ಹತ್ತಿ ಬಟ್ಟೆ, ಸುಣ್ಣ ತಯಾರಿಕೆ ಮತ್ತು ಬೊಂಬಿನಿಂದ ವಿವಿಧ ವಸ್ತುಗಳ ತಯಾರಿಕೆ, ಮರಗೆಲಸ, ಕುಶಲ ಕೆತ್ತನೆ ಮುಂತಾದವುಗಳಿಗೆ ಈ ತಾಲ್ಲೂಕು ಹೆಸರಾದದ್ದು. ಇಲ್ಲಿನ ಗುಡಿಗಾರರು ಕೆತ್ತನೆಯ ಕುಸುರಿ ಕೆಲಸದಲ್ಲಿ ನಿಪುಣರು. ಈ ತಾಲ್ಲೂಕಿನಲ್ಲಿ ಚರ್ಮೋದ್ಯೋಗವೂ ಸ್ವಲ್ಪಮಟ್ಟಿಗೆ ಇದೆ. ಇಲ್ಲಿನ ಗುಡಿಗಾರರು ತಮ್ಮ ವೃತ್ತಿರಕ್ಷಣೆ ಮತ್ತು ಅಗತ್ಯ ಧನಸಹಾಯಕ್ಕೆ ತಮ್ಮದೇ ಆದ ಒಂದು ಸಹಕಾರ ಸಂಘವನ್ನು ಸ್ಥಾಪಿಸಿಕೊಂಡಿದ್ದಾರೆ. ಸೊರಬಕ್ಕೆ ದಕ್ಷಿಣದಲ್ಲಿರುವ ಸಾಗರ ರೈಲ್ವೆನಿಲ್ದಾಣ 29 ಕಿಮೀ ದೂರದಲ್ಲಿದೆ. ತಾಳಗುಪ್ಪ ಹತ್ತಿರದ ಇನ್ನೊಂದು ರೈಲ್ವೆನಿಲ್ದಾಣ.

	ಸೊರಬದ ಉತ್ತರಕ್ಕೆ ಸು. 20ಕಿಮೀ ದೂರದಲ್ಲಿರುವ ಕುಪಟೂರು ಚಂದ್ರಹಾಸನ ಕುಂತಳನಗರವಾಗಿತ್ತೆಂಬುದು ಸ್ಥಳಪುರಾಣ. ಇಲ್ಲಿಯ ಕೈಟಭೇಶ್ವರ ದೇವಾಲಯ ಉತ್ತಮ ವಾಸ್ತುಕೃತಿ. ಸೊರಬದ ವಾಯವ್ಯಕ್ಕೆ 16 ಕಿಮೀ ಅಂತರದಲ್ಲಿರುವ ಚಂದ್ರಗುತ್ತಿ (ನೋಡಿ) ಇತಿಹಾಸ ಪ್ರಸಿದ್ಧ ಸ್ಥಳ. ಸೊರಬದ ಉತ್ತರಕ್ಕೆ 15 ಕಿಮೀ ದೂರದಲ್ಲಿರುವ ಕುಪ್ಪಗದ್ದೆಯ ರಾಮೇಶ್ವರ ದೇವಾಲಯ 12ನೆಯ ಶತಮಾನದ ಉತ್ತಮ ವಾಸ್ತುಶಿಲ್ಪ. ಸೊರಬದ ಈಶಾನ್ಯಕ್ಕೆ ಸು. 38 ಕಿಮೀ ದೂರದಲ್ಲಿರುವ ಭಾರಂಗಿಯ ಜೈನಬಸದಿ, ತ್ರಿಕೂಟಾಚಲ ಶೈವದೇಗುಲ, ಮಲ್ಲಿಕಾರ್ಜುನ ದೇವಾಲಯ, ಬನಶಂಕರಿ ಗುಡಿ ಮುಂತಾದವು ಗಮನಾರ್ಹವಾದವು. ಸೊರಬದ ಉತ್ತರಕ್ಕೆ 38 ಕಿಮೀ ದೂರದಲ್ಲಿರುವ ಬಂಕದಾಣದಲ್ಲಿ ಪ್ರತಿವರ್ಷ ಜನವರಿಯಲ್ಲಿ ದಂಡಾವತಿ-ವರದಾನದಿ ಸೇರುವೆಡೆ ಹೊಳೆಲಿಂಗೇಶ್ವರನ ಜಾತ್ರೆ ಜರುಗುತ್ತದೆ.

	ಸೊರಬ ಈ ತಾಲ್ಲೂಕಿನ ಆಡಳಿತ ಕೇಂದ್ರ ಹಾಗೂ ಪಟ್ಟಣ. ದಂಡಾವತಿ ನದಿಯ ಬಲದಂಡೆಯ ಮೇಲೆ ಶಿವಮೊಗ್ಗದ ವಾಯವ್ಯಕ್ಕೆ 88 ಕಿಮೀ ದೂರದಲ್ಲೂ ಸಾಗರದ ಉತ್ತರಕ್ಕೆ 29 ಕಿಮೀ ದೂರದಲ್ಲೂ ಇದೆ. ಜನಸಂಖ್ಯೆ 7,424.

	ಇಲ್ಲಿಯ ಸ್ಥಳಪುರಾಣದಂತೆ ಶ್ರೀರಂಗನಾಥ ದೇವರ ಮೇಲೆ ಸುರಲೋಕದ ಸುರಭಿಗಳು ದಿನನಿತ್ಯ ಹಾಲು ಸುರಿಸುತ್ತಿದ್ದರಿಂದ ಈ ಸ್ಥಳಕ್ಕೆ ಸೊರಬ ಎಂದು ಹೆಸರು ಬಂದಿತೆಂದು ಪ್ರತೀತಿ. ಇಲ್ಲಿರುವ ಪ್ರಾಚೀನ ರಂಗನಾಥ ದೇವಾಲಯ ಕೆಳದಿ ನಾಯಕರ ಕಾಲದಲ್ಲಿ ಜೀರ್ಣೋದ್ಧಾರ ಹೊಂದಿತ್ತು. ಈ ದೇವಾಲಯ ಗರ್ಭಗೃಹ, ಅಂತರಾಳ, ನವರಂಗ ಹಾಗೂ ಮಂಟಪಗಳನ್ನೊಳಗೊಂಡಿದೆ. 1890ರಲ್ಲಿ ಸ್ಥಾಪಿತವಾಯಿತೆಂದು ಹೇಳಲಾದ ನರಹರಿಸ್ವಾಮಿ ಆಶ್ರಮ, ಪುರಾಣಮಠ ಗಳಿವೆ. ಈ ಪಟ್ಟಣದಲ್ಲಿ ತಯಾರಾಗುವ ಶ್ರೀಗಂಧದ ಕೆತ್ತನೆಯ ವಿವಿಧ ವಸ್ತುಗಳು ಹಾಗೂ ಕೆರೆಯಬೆಂಡಿನ ಬಾಸಿಂಗ ಬಹು ಆಕರ್ಷಣೀಯವಾದವು.	   
  (ಎಚ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ